ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಶಾಸಕ ಕೆ.ವೈ. ನಂಜೇಗೌಡ ಮೂರನೆ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಬ್ಬರು ಕಾಂಗ್ರೆಸ್ ಶಾಸಕರಿಗೆ ಪ್ರತಿಷ್ಠೆಯಾಗಿದ್ದ ಅಧ್ಯಕ್ಷ ಸ್ಥಾನ ಕೊನೆಗೂ ವರಿಷ್ಠರ ನಿರ್ದೇಶನದಂತೆ ಕೆ.ವೈ. ನಂಜೇಗೌಡ ಪಾಲಾಗಿದೆ.
ಕೋಲಾರ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಲಾರ – ಚಿಕ್ಕಬಳ್ಳಾಪುರ ಅವಿಭಜಿತ ಜಿಲ್ಲೆಯ ಹಾಲು ಒಕ್ಕೂಟದಲ್ಲಿ ಪ್ರತಿದಿನದ ಸಂಗ್ರಹಣೆ ಪ್ರಮಾಣ 10 ಲಕ್ಷ ಲೀಟರುಗಳಿಗೆ ಏರಿತ್ತು. ಒಕ್ಕೂಟದ ವಿಭಜನೆ ನಂತರ ಕೋಲಾರದಲ್ಲಿ ಸಂಗ್ರಹಣೆ ಪ್ರಮಾಣ ಸರಿದೂಗಿಸಲು ಒಂದು ವರ್ಷದ ಕ್ರಿಯಾಯೋಜನೆ ರೂಪಿಸಲಾಗುವುದು ಎಂದು ತಿಳಿಸಿದ್ದಾರೆ. ಕೋಲಾರ ಜಿಲ್ಲಾ ಹಾಲು ಒಕ್ಕೂಟದಲ್ಲಿ ಪ್ರತಿದಿನ 10 ಲಕ್ಷಕ್ಕೆ ಏರಿಸುವುದು ನೂತನ ಆಡಳಿತ ಮಂಡಳಿಯ ಗುರಿಯಾಗಿದೆ ಎಂದು ಕೋಲಾರ ಹಾಲು ಒಕ್ಕೂಟದ ನೂತನ ಅಧ್ಯಕ್ಷ ಹಾಗೂ ಮಾಲೂರು ಶಾಸಕ ಕೆ.ವೈ. ನಂಜೇಗೌಡ ತಿಳಿಸಿದ್ದಾರೆ. ಈ ಮಧ್ಯೆ ಕೆಎಂಎಫ್ ಅಧ್ಯಕ್ಷ ಸ್ಥಾನದ ಆಸೆಯನ್ನೂ ಶಾಸಕ ನಂಜೇಗೌಡ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ನಾಮನಿರ್ದೇಶಿತರು ಸೇರಿ ಒಟ್ಟು 13 ನಿರ್ದೇಶಕರಿದ್ದು, ಒಬ್ಬ ನಾಮ ನಿರ್ದೇಶಿತ ನಿರ್ದೇಶಕ ಹಾಗೂ ನಾಲ್ಕು ಜನ ಅಧಿಕಾರಿಗಳು ಸೇರಿ ಒಟ್ಟು 18 ಜನರಿಗೆ ಮತದಾನಕ್ಕೆ ಅವಕಾಶವಿತ್ತು. ಅಧ್ಯಕ್ಷ ಸ್ಥಾನ ಗೆಲ್ಲಲು 10 ನಿರ್ದೇಶಕರ ಬೆಂಬಲ ಬೇಕಿತ್ತು. ಅದರಂತೆ 13 ನಿರ್ದೇಶಕರು ಚುನಾಯಿತರಾಗಿದ್ದು ಈ ಪೈಕಿ ಕೆ.ಆರ್.ರಮೇಶ್ ಕುಮಾರ್ ಬಣದ ಬೆಂಬಲಿತ, ಅಂದರೆ ನಂಜೇಗೌಡ ಪರವಾಗಿ ಎಂಟು ನಿರ್ದೇಶಕರು ಇದ್ದರು. ಮುನಿಯಪ್ಪ ಬಣದ ಇಬ್ಬರು ನಿರ್ದೇಶಕರು ಚುನಾವಣೆ ಪ್ರಕ್ರಿಯೆಯಿಂದ ದೂರ ಉಳಿದಿದ್ದರಿಂದ ನಂಜೇಗೌಡ ಅವಿರೋಧವಾಗಿ ಆಯ್ಕೆಯಾದರು. ತಮ್ಮ ಪರವಾದ ಸುಮಾರು 8 ನಿರ್ದೇಶಕರು ಹಾಗೂ ಶಾಸಕರು, ಕಾಂಗ್ರೆಸ್ ಮುಖಂಡರೊಂದಿಗೆ ಕೋಮುಲ್ ಕಚೇರಿಗೆ 12.30 ನಿಮಿಷಕ್ಕೆ ಆಗಮಿಸಿದ ನಂಜೇಗೌಡ ತಮ್ಮ ನಾಮಪತ್ರ ಸಲ್ಲಿಸಿದರು. ಅದರಂತೆ, ಒಬ್ಬರೇ ನಾಮಪತ್ರ ಸಲ್ಲಿಕೆ ಮಾಡಿದ ಕಾರಣ ಅವಿರೋಧವಾಗಿ ಆಯ್ಕೆಯಾದರು.
